ಕೆಂಜ್ವರ
ರಕ್ತಛಿದ್ರಕ ಸ್ಟ್ರೆಪ್ಟೋಕಾಕಸ್ ದಂಡಾಣುಜೀವಿ ಗಂಟಲನ್ನು ಸೇರಿದಾಗ ಉಂಟಾಗುವ ನಂಜಿನ ಪರಿಣಾಮವಾದ ಜ್ವರ (ಸ್ಕಾರ್ ಲೆಟ್ ಫೀವರ್ ಅಥವಾ ಸ್ಕಾರ್ ಲೆಟೀಸ್).  ಗಂಟಲು ನೋವು, ಗಂಟಲು ಉರಿ ಮತ್ತು ಕೆಂಪು ಗುಳ್ಳೆಗಳ ಸಹಿತವಾದ ಜ್ವರ ಈ ರೋಗದ ಲಕ್ಷಣಗಳು.  ಮಧ್ಯ ಕಿವಿ ಕೀವುಗಟ್ಟುವಿಕೆ, ಕೀಲುಜ್ವರ ಮತ್ತು ಮೂತ್ರಜನಕಾಂಗದ ಉರಿ ಇತರ ಬಾಧೆಗಳು.  ರೋಗದ ಸೋಂಕು ತುಂತುರು ಹನಿಗಳ ಮೂಲಕವೂ ಮಲಿನ ಆಹಾರ ಪಾನೀಯಗಳ ಮೂಲಕವೂ ಹರಡುತ್ತದೆ.  ಈ ರೋಗ ಶಾಲೆಗೆ ಹೋಗುವ ಮಕ್ಕಳಲ್ಲಿ ವಿಶೇಷವಾದರೂ, ಭಾರತದಲ್ಲಿ ಅಷ್ಟಾಗಿ ಕಾಣಸಿಕ್ಕದು. ಈ ಅಣುಜೀವಿ ಗಂಟಲಿನ ಸಂಬಂಧ ಪಡೆದ ಲಸಿಕೆ ಗ್ರಂಥಿಗಳಲ್ಲಿ ಹುದುಗಿ ಕುಳಿತು ನಾಲ್ಕೈದು ದಿವಸಗಳ ಅನಂತರ ರೋಗದ ಲಕ್ಷಣಗಳನ್ನು ಏಕಾಏಕಿಯಾಗಿ ಪ್ರಕಟಗೊಳಿಸುತ್ತದೆ. ರೋಗ ತೋರಿಬಂದ ಒಂದೆರಡು ದಿವಸಗಳಲ್ಲಿಯೇ ಅದು ಉಲ್ಬಣಸ್ಥಿತಿಗೆ ತಲಪುವುದು.  ಪ್ರಾರಂಭದಲ್ಲಿ ಸುಸ್ತು, ಹಸಿವಿಲ್ಲದಿರುವಿಕೆ, ಜ್ವರ, ಚಳಿ, ತಲೆನೋವು ಮತ್ತು ಗಂಟಲಬೇನೆ ಇರುತ್ತವೆ.  ಜ್ವರ ತೀವ್ರವಾಗಿರುವಾಗ ಅಣುಜೀವಿ ವಿಸರ್ಜಿಸುವ ಜೀವಿವಿಷದ ಫಲವಾಗಿ ರಕ್ತದ ಒತ್ತುಕಟ್ಟಾಗಿ ಚರ್ಮ ಕೆಂಪಡರುವುದು.  ಕುತ್ತಿಗೆ, ಮುಖ, ಕಿವಿಯ ಸುತ್ತಮುತ್ತ ಎದೆಯ ಮೇಲ್ಭಾಗ, ಹೊಟ್ಟೆ ಮತ್ತು ಕೈಕಾಲುಗಳ ಮೇಲೆ ಕೆಂಪು ದದ್ದು ತೀವ್ರವಾಗಿ ಹರಡುವುದು. ನಾಡಿಯ ಬಡಿತ ತೀವ್ರವಾಗಿರುವುದು.  ಗಂಟಲು, ಗಲಗ್ರಂಥಿ, ಕಿರುನಾಲಗೆ ಮತ್ತು ಮೃದ್ವಂಗುಳದ ಮೇಲಿನ ಲೋಳೆಪೊರೆ ಕೆಂದಾವರೆಯಂತೆ ಕೆಂಪಗೆ ಉಬ್ಬಿ ದಪ್ಪನಾಗುವುದು.  ಲಸಿಕೆ ಗ್ರಂಥಿಗಳ ಬಾವಿನ ಫಲವಾಗಿ ಗಂಟಲು ಬೆಣಚುಗಲ್ಲಿನ ಹಾಸಿನಂತೆ ತೋರಿಬರುತ್ತದೆ.  ಪ್ರಾರಂಭದಲ್ಲಿ ನಾಲಗೆಯ ಲೋಳೆಪೊರೆಯ ಕಣಗಳು ಪೊರೆ ಸಮೇತ ಉದುರಿಬಿದ್ದು ಸವಿಕುಡಿಗಳು ಅದರ ಮೇಲೆದ್ದು ತೋರಿದಾಗ ಅದು ತೊಂಡೆಹಣ್ಣಿನಂತೆ ಕಾಣುವುದು. ಮೈಕೆಂಬಣ್ಣ ತಳೆದಾಗ ದೂರದಿಂದ ನೋಡಿದರೆ ಎಲ್ಲೆಡೆಯಲ್ಲೂ ಒಂದೇ ರೀತಿಯಾಗಿ ತೋರಿಬರುತ್ತದೆ. ಆದರೆ ಹತ್ತಿರದಿಂದ ನೋಡಿದಾಗ ಸೂಜಿಮೊನೆಯಂಥ ಅನೇಕ ಚಿಕ್ಕಚಿಕ್ಕ ಕೆಂಪಾದ ಚುಕ್ಕೆಗಳು ಚರ್ಮದ ಮೇಲೆದ್ದಿರುವುದನ್ನು ಕಾಣಬಹುದು.  ಈ ಚರ್ಮವನ್ನು ಮುಟ್ಟಿದಾಗ ಉಪ್ಪು ಕಾಗದದ ಮೇಲೆ ಕೈಯಾಡಿಸಿದಂತೆ ಭಾಸವಾಗುತ್ತದೆ.  ಜ್ವರದ ಅವಧಿ 8-10 ದಿವಸಗಳು. ಅಷ್ಟರಲ್ಲಿ ಅದು ತಣಿದು ಗಂಟಲು ನೋವಿನ ಬಾಧೆ ಶಮನಗೊಳ್ಳುವುದು.  ಕೆಂಪಡರಿದ ಚರ್ಮ ಒಂದು ವಾರದಲ್ಲಿ ಮೊದಲಿನ ಬಣ್ಣ ಪಡೆಯುವುದು ಮತ್ತು ಹೊರಚರ್ಮವೆಲ್ಲ ಒಣಗಿ ಪಕಳೆಯಾಗಿ ಉದುರಿಹೋಗುವುದು.

	ರಕ್ತಪರೀಕ್ಷೆ ಮಾಡಿದಾಗ ಬಿಳಿ ಕಣಗಳ ಸಂಖ್ಯೆ ಹೆಚ್ಚಿರುವುದು ತಿಳಿಯುತ್ತದೆ.  ಗಂಟಲನ್ನು ಒರೆಸಿ ತೆಗೆದು ದ್ರವವನ್ನು ತಳಿ ಮಾಡಿದರೆ ರಕ್ತಛಿದ್ರಕ ಸ್ಟ್ರೆಪ್ಟೋಕಾಕಸ್ ಬೆಳೆಯುತ್ತದೆ.  ಈ ಅಣುಜೀವಿಯ ಜೀವಿವಿಷವನ್ನು ಮುಂಗೈ ಚರ್ಮದೊಳಗೆ ಕೊಟ್ಟು ಡಿಕ್ ಪರೀಕ್ಷೆ ಮಾಡಿದರೆ ರೋಗಕ್ಕೆ ಈಡಾಗುವ ಸಂಭವ ಇರುವವರಲ್ಲಿ ಆ ಪ್ರದೇಶ ಕೆಂಪಾಗಿ ತೋರಿಬರುತ್ತದೆ.  ಪೆನಿಸಿಲಿನ್ ಈ ರೋಗದ ವಿರುದ್ಧ ಪ್ರಬಲವಾದ ಔಷಧ.  ಅದನ್ನು ಹತ್ತು ದಿವಸಗಳ ಪರ್ಯಂತ ಕೊಟ್ಟರೆ ಈ ಜೀವಿಗಳೆಲ್ಲ ದೇಹದಿಂದ ದೂರವಾಗುವುವು.               

(ಪಿ.ಎಸ್.ಎಸ್.; ಎಚ್.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ